Published as a student contribution under INK & ECHO – The English Literary Club @ SAC, as part of the Teachers’ Day creative writing activity.
ಭಾರತೀಯ ಸಂಸ್ಕೃತಿಯಲ್ಲಿ ‘ಗುರು-ಶಿಷ್ಯರ’ ಬಾಂಧವ್ಯಕ್ಕೆ ಅತ್ಯುನ್ನತ ಸ್ಥಾನವಿದೆ. “ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ” ಎಂಬ ಉಕ್ತಿಯು ತಂದೆ-ತಾಯಿಯ ನಂತರದ ಅತ್ಯಂತ ಪವಿತ್ರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿದೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆ:
ಭಾರತದ ಎರಡನೇ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ, ಜ್ಞಾನಿ ಮತ್ತು ಶ್ರೇಷ್ಠ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗೌರವಿಸಲು 1962ರಿಂದ ಅವರ ಜನ್ಮದಿನವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ನನ್ನ ಬಾಲ್ಯದ ದಿನಗಳಲ್ಲಿ ಶಿಕ್ಷಕರ ದಿನಾಚರಣೆಯ ಆಚರಣೆ:
ನಮ್ಮ ಶಾಲೆ ಮತ್ತು ಕಾಲೇಜುಗಳಲ್ಲಿ ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಾವು ನಮ್ಮ ನೆಚ್ಚಿನ ಮತ್ತು ಎಲ್ಲಾ ಶಿಕ್ಷಕರಿಗೂ ಶುಭಾಶಯಗಳನ್ನು ಕೋರುತ್ತಿದ್ದೆವು. ಅವರಿಗೆ ಹೂವುಗಳು ಮತ್ತು ಉಡುಗೊರೆಗಳನ್ನು ನೀಡುತ್ತಿದ್ದೆವು. ಅವರಿಗೆ ಕೆಲವು ಆಟಗಳನ್ನು ಆಡಿಸಿ ಬಹುಮಾನ ನೀಡುತ್ತಿದ್ದೆವು. ಒಂದು ಮುಖ್ಯವಾದ ವಿಷಯ ಏನೆಂದರೆ, ಶಿಕ್ಷಕರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯಂದು ಶಿಕ್ಷಕರು ನಮಗೆ ಬೈಯುತ್ತಿರಲಿಲ್ಲ, ಹೊಡೆಯುತ್ತಿರಲಿಲ್ಲ. ಆ ದಿನಗಳನ್ನು ನಾವು ಹಬ್ಬದಂತೆ ಸಂಭ್ರಮಿಸುತ್ತಿದ್ದೆವು. ಇದರ ಜೊತೆಗೆ ನಮಗೆ ಅರ್ಧ ದಿನ ರಜೆ ಸಿಗುತ್ತಿತ್ತು. ಪಾಠ-ಪ್ರವಚನಗಳು ನಡೆಯುತ್ತಿರಲಿಲ್ಲ. ಇದು ಇನ್ನೊಂದು ಕಡೆ ಖುಷಿ. ನಂತರ ಸಿಹಿ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆವು. ಈ ರೀತಿಯಾಗಿ ಆಚರಣೆ ಮಾಡುತ್ತಿದ್ದೆವು.
ಶಿಕ್ಷಕರ ಪಾತ್ರ:
ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುವವರು ಶಿಕ್ಷಕರು. ತಂದೆ-ತಾಯಿ ಜನ್ಮ ನೀಡಿದರೆ, ನಮಗೆ ಉತ್ತಮ ಶಿಕ್ಷಣ, ಸಂಸ್ಕಾರ ಮತ್ತು ಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವವರು ನಮ್ಮ ಶಿಕ್ಷಕರು. ಮೇಣದಬತ್ತಿ ತನ್ನನ್ನು ತಾನು ಕರಗಿಸಿಕೊಂಡು ಇತರರಿಗೆ ಬೆಳಕು ನೀಡುವಂತೆ, ಶಿಕ್ಷಕರು ತಮ್ಮ ಜ್ಞಾನದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುತ್ತಾರೆ. ಶಿಸ್ತು, ಸತ್ಯಸಂಧತೆ, ಪ್ರಾಮಾಣಿಕತೆ, ಕರುಣೆ ಮತ್ತು ಸಹನೆ ಮುಂತಾದ ಸನ್ಮೌಲ್ಯಗಳನ್ನು ಬಾಲ್ಯದಲ್ಲೇ ಬೆಳೆಸಿ ನಮ್ಮನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ನೀಡಿ ಬೆಳೆಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಅವರು ಸೋತಾಗ ಅಥವಾ ಕಷ್ಟದಲ್ಲಿದ್ದಾಗ ಧೈರ್ಯ ತುಂಬಿ ಆತ್ಮವಿಶ್ವಾಸ ಹೆಚ್ಚಿಸುವ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವಂತೆ, ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ರಾಜಕಾರಣಿ ಅಥವಾ ಐಎಎಸ್ ಅಧಿಕಾರಿಗಳಾಗಲಿ, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಶಿಕ್ಷಕನ ಶ್ರಮವಿರುತ್ತದೆ. ಸಮಾಜದಲ್ಲಿದ್ದ ಮೂಢನಂಬಿಕೆಗಳು, ಅಸ್ಪೃಶ್ಯತೆ ಮತ್ತು ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಲಗಿಸಿ ಸಮಾನತೆಯ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಕೊಡುಗೆ ದೊಡ್ಡದು.
ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಕ್ಷೇತ್ರವು ಅದ್ಭುತವಾದ ಬದಲಾವಣೆಗೆ ಸಾಕ್ಷಿಯಾಗಿದೆ. ಕೊರೋನಾ ಸಾಂಕ್ರಾಮಿಕದ ನಂತರ ವೇಗ ಪಡೆದ ಆನ್‌ಲೈನ್ ಶಿಕ್ಷಣ ಮತ್ತು ಇತ್ತೀಚಿನ AI ತಂತ್ರಜ್ಞಾನವು ವಿದ್ಯಾರ್ಥಿಗಳ ಕಲಿಕೆಯ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಗೂಗಲ್, ಚಾಟ್‌ಜಿಪಿಟಿಯಂತಹ AI ಉಪಕರಣಗಳು ಸೆಕೆಂಡುಗಳಲ್ಲಿ ಮಾಹಿತಿ ನೀಡುವ ಈ ಕಾಲದಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಾಂಪ್ರದಾಯಿಕ ಬಾಂಧವ್ಯ ಹಾಗೂ ಶಿಕ್ಷಕರ ಪಾತ್ರ ಹೊಸ ಸ್ವರೂಪ ಪಡೆದುಕೊಂಡಿದೆ.
ಹಿಂದೆ ಶಿಕ್ಷಕರು ಜ್ಞಾನದ ಪ್ರಮುಖ ಆಕರವಾಗಿದ್ದರು. ಆದರೆ ಇಂದು ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಿದೆ. ಆನ್‌ಲೈನ್ ತರಗತಿಗಳಿಂದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ತರಗತಿಯಲ್ಲಿ ಶಿಕ್ಷಕರು ತೋರಿಸುವ ಪ್ರೀತಿ, ಕಣ್ಣೋಟದ ಸಂಪರ್ಕ ಮತ್ತು ಮುಖಾಮುಖಿ ಮಾತುಕತೆಯಲ್ಲಿ ಸಿಗುವ ಭಾವನಾತ್ಮಕ ಬೆಂಬಲ ಆನ್‌ಲೈನ್‌ನಲ್ಲಿ ಸಿಗುವುದಿಲ್ಲ.
ತಂತ್ರಜ್ಞಾನ ಎಷ್ಟೇ ಬೆಳೆದರೂ, AI ಎಷ್ಟೇ ಬುದ್ಧಿವಂತವಾದರೂ ಅದು ಕೇವಲ ಒಂದು ಸಹಕಾರಿ ಉಪಕರಣವಷ್ಟೇ. ಶಿಕ್ಷಕರ ಸ್ಥಾನವನ್ನು AI ಎಂದಿಗೂ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಯಂತ್ರಗಳು ಮಾಹಿತಿಯನ್ನು ನೀಡಬಲ್ಲವು, ಆದರೆ ಶಿಕ್ಷಕರು ಮಾತ್ರ ಸ್ಫೂರ್ತಿ ಮತ್ತು ಸಂಸ್ಕಾರವನ್ನು ನೀಡಬಲ್ಲರು. ಆನ್‌ಲೈನ್ ಶಿಕ್ಷಣ ಮತ್ತು AI ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳುತ್ತಾ, ಗುರು-ಶಿಷ್ಯರ ನಡುವಿನ ಪವಿತ್ರ ಭಾವನಾತ್ಮಕ ಬಾಂಧವ್ಯವನ್ನು ಕಾಯ್ದುಕೊಳ್ಳುವುದು ಪ್ರಸ್ತುತ ಕಾಲದಲ್ಲಿ ಅಗತ್ಯವಾಗಿದೆ.
ಕೊನೆಯದಾಗಿ, ಗುರುವಿನ ಹಾರೈಕೆ ಮತ್ತು ಶಿಷ್ಯನ ಶ್ರದ್ಧೆ ಒಂದಾದಾಗ ಮಾತ್ರ ಯಶಸ್ಸು ಸಾಧ್ಯ. ನಮ್ಮ ಯಶಸ್ಸಿನ ಹಿಂದೆ ಸದಾ ಶ್ರಮಿಸುವ ನಮ್ಮ ನೆಚ್ಚಿನ ಶಿಕ್ಷಕರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಗುರುಗಳ ಮಾತನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಸಾಧನೆ ಮಾಡುವುದೇ ನಾವು ಅವರಿಗೆ ನೀಡುವ ನಿಜವಾದ ಗುರುದಕ್ಷಿಣೆ.
— ತನುಶ್ರೀ ಎಲ್. ಎಸ್.
ದ್ವಿತೀಯ ಬಿ.ಎ., ‘ಸಿ’ ವಿಭಾಗ
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ
Comments
Post a Comment